Home    Tour    Health    Music    Quote    Story    Joke


ಯೋಗದ ಮಹತ್ವ ಹಾಗೂ ಸಂದೇಶ


ಯೋಗವು ಪ್ರಪಂಚಕ್ಕೆ ಭಾರತೀಯರ ಕೊಡುಗೆ ಎಂದು ಹೇಳಲು ಹೆಮ್ಮೆ ಯಾಗುತ್ತದೆ. ಜೂನ್ 21 ರಂದು ಇಡೀ ವಿಶ್ವವೇ ಯೋಗದಿವಸವೆಂದು ಆಚರಿಸುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಯೋಗಕ್ಕೆ ಈ ಹಿರಿಮೆಯ ಗರಿಯನ್ನು ತಂದುಕೊಟ್ಟವರು ನಮ್ಮೆಲ್ಲರ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು.

ಯೋಗ ಎಂದರೇನು? ಆಸನಗಳೇ ಪ್ರಾಣಾಯಾಮವೇ ಅಥವಾ ಎರಡೂ ಸೇರಿಯೇ? ಈ ಪ್ರಶ್ನೆಗೆ ಉತ್ತರ ಬಲು ಕಷ್ಟ ಅಷ್ಟೇ ಅಲ್ಲ ಬಭಳ ವ್ಯಾಪ್ತಿಯುಳ್ಳದ್ದು. ಯೋಗ ಎಂದರೆ ಯೋಗಾಸನವೂ ಹೌದು ಪ್ರಾಣಾಯಾಮವೂ ಹೌದು. ಆದರೆ ಅದಷ್ಟೇ ಅಲ್ಲ . ಯೋಗವು ಎಂಟು ಅಂಗಗಳನ್ನು ಉಳ್ಳದ್ದು , ಅದೇ ಅಷ್ಟಾಂಗ ಯೋಗ . ಇದು ಪ್ರಾಚೀನ ಭಾರತದ ಋಷಿಗಳು ನೀಡಿದ ವಿಜ್ಞಾನ. ಯಮ, ನಿಯಮ , ಆಸನ , ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ , ಸಮಾಧಿ ಇವೇ ಆ ಎಂಟು ಅಂಗಗಳು. ಯೋಗಾಭ್ಯಾಸಿಗಳಿಗೆ ಈ ಶಬ್ದಗಳು ಪರಿಚಿತ.
ನಮ್ಮ ದೇಶದ ಪರಂಪರೆಯಲ್ಲಿ ಅನೇಕ ಯೋಗಿಗಳ ಬಗ್ಗೆ ಅನೇಕರು ಕೇಳಿದ್ದೇವೆ. ಅವರೆಲ್ಲ ಈ ಎಂಟು ಹಂತದ ಯೋಗವನ್ನು ಅಭ್ಯಸಿಸುತ್ತಾ ಭಗವಂತನನ್ನು ಉಪಾಸಿಸಿ ಅವನ ಸಾನ್ನಿಧ್ಯವನ್ನು ಅನುಭವಿಸಿದವರು. ಅಂದರೆ ಈ ಅಷ್ಟಾಂಗ ಯೋಗವು ಕೇವಲ ಶಾರೀರಿಕ ವ್ಯಾಯಾಮವಾಗದೇ ಪರಮಾತ್ಮನ ಜೊತೆ ನಮ್ಮ ಅವಿನಾಭಾವ ಸಂಬಂಧವನ್ನು ಅನುಭವಿಸುವುದೇ ಅದರ ಅಂತಿಮ ಗುರಿ , ಘಟ್ಟ. ಆದರೆ ಆ ಮಟ್ಞಕ್ಕೇರಲು ಎಲ್ಲರಿಂದ ಸಾಧ್ಯವೇ ? ಇಲ್ಲವಾದರೂ ಪ್ರಯತ್ನ ಪಡಬಹುದಲ್ಲವೇ? ಯೋಗದ ಪರಿಪೂರ್ಣತೆಯನ್ನು ಮುಟ್ಟಲು ಹಲವಾರು ಮಜಲುಗಳಲ್ಲಿ ನಮ್ಮ ದೇಹವನ್ನೂ ಮನವನ್ನೂ ಹದಗೊಳಿಸಬೇಕು. ಮೊದಲಿಗೆ, ಉಸಿರಾಟದ ಮೇಲೆ ನಿಯಂತ್ರಣ ಸಾಧಿಸಬೇಕು. ನೆನಪಿಡಿ, ಉಸಿರಿಗೂ ಮನಸ್ಸಿಗೂ ನಿಕಟ ಸಂಬಂಧವಿದೆ. ಉಸಿರಿನ ನಿಯಂತ್ರಣದಿಂದ ಮನಸ್ಸು ಹತೋಟಿಗೆ ಬರುತ್ತದೆ. ಯಮ, ನಿಯಮ ಎಂಬ ಎರಡು ಹಂತಗಳಲ್ಲಿ ದೇಹವನ್ನು ಶಿಸ್ತುಬದ್ಧ ಜೀವನ ಶೈಲಿಯಿಂದ ಹದಗೊಳಿಸಿದರೆ ಮಾತ್ರ ಯೋಗಾಸನಗಳನ್ನು ಮಾಡುವುದು ಸುಲಭವಾಗುತ್ತದೆ. ಆಸನಗಳನ್ನು ಮಾಡುವಾಗ ಉಸಿರಿನ ಮೇಲೆ ನಮ್ಮ ಗಮನ ಪೂರ್ತಿ ಕೇಂದ್ರೀಕೃತವಾಗಿದ್ದರೆ ಮಾತ್ರ ಆಯಾ ಆಸನದ ಪೂರ್ಣ ಪ್ರಯೋಜನ ಪಡೆಯಬಹುದು. ಹೀಗೆ ಪ್ರಾರಂಭಿಸಿ ಕ್ರಮೇಣ ಉಸಿರಿನ ಮೇಲೂ , ಮನಸ್ಸಿನ ಮೇಲೂ ಏಕಾಗ್ರತೆ ಸಾಧಿಸುವುದರಿಂದ ಅನವಶ್ಯವಾದ ಭಾವನೆಗಳೂ, ವಿಚಾರಗಳೂ ಮೆದುಳಿನಿಂದ ಹೊರಹೋಗಲು ಅನುಕೂಲವಾಗುತ್ತದೆ. ಕ್ರಮೇಣ ಮನಸ್ಸು ಪ್ರಶಾಂತ ಸ್ಥಿತಿಗೆ ಬರುತ್ತದೆ. ಸಾಮಾನ್ಯವಾಗಿ "ನಾನು ಯೋಗ ಮಾಡುತ್ತೇನೆ " ಎಂದು ಹೇಳುವವರು ಈ ಮಟ್ಟದ ಸಾಧನೆಯನ್ನು ಮಾಡಿರುತ್ತಾರೆ. ಆದರೆ ಯೋಗಾಭ್ಯಾಸ ಇಷ್ಟಕ್ಕೇ ನಿಲ್ಲುವುದಿಲ್ಲ ಎಂಬುದನ್ನು ನಾವು ಮನಗಾಣಬೇಕು. ಆಸನ , ಪ್ರಾಣಾಯಾಮಗಳು ಯೋಗದ ಒಂದು ಹಂತವಷ್ಟೇ. ಅಷ್ಟಕ್ಕೇ ನಿಲ್ಲದೇ , ಈ ಭೌತಿಕ ಶರೀರವನ್ನೇ ಒಂದು ಸಾಧನವಾಗಿ ಪರಿಗಣಿಸಿ ( ಶರೀರಮಾಧ್ಯಂ ಖಲು ಧರ್ಮಸಾಧನಂ ಎಂಬಂತೆ) ನಮ್ಮ ಗುರಿಯನ್ನು ಪರಮಾತ್ಮನೆಡೆಗೆ ಕೇಂದ್ರೀಕರಿಸಿ ನಡೆದರೆ ಮಾತ್ರ ನಾವು ಪರಿಪೂರ್ಣ ಯೋಗಿಗಳಾಗಬಹುದು. ಸರಳವಾಗಿ ಹೇಳುವುದಾದರೆ , ಆಸನ , ಪ್ರಾಣಾಯಾಮದ ಜೊತೆಗೆ , ನಾವು ಈ ಕೆಳಗಿನ ಅಭ್ಯಾಸಗಳನ್ನು ಮಾಡಿ ನಮ್ಮ ಮನಸ್ಸನ್ನು ನಿಯಂತ್ರಿಸಿ ವ್ಯಕ್ತಿತ್ವವನ್ನು ಉನ್ನತಗೊಳಿಸಬೇಕು. ಈ ಬಗ್ಗೆ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಅನೇಕ ಅಧ್ಯಾಯಗಳಲ್ಲಿ ವಿಶದಪಡಿಸಿದ್ದಾನೆ. ಅದರಲ್ಲಿ ಒಂದು ಅಂಶ 13ನೇ ಅಧ್ಯಾಯದ 7,8,9,10 ಶ್ಲೋಕಗಳಲ್ಲಿ ಈ ರೀತಿಯಾಗಿ ವಿವರಿಸಿದ್ದಾನೆ.
1. ಅಮಾನಿತ್ವಂ: ನಿರಹಂಕಾರ

2. ಅದಂಭಿತ್ವಂ: ನಿರಾಡಂಬರ 

3. ಅಹಿಂಸಾ: ಯಾವ ಪ್ರಾಣಿಯನ್ನೂ ಹಿಂಸೆ ಮಾಡದಿರುವುದು

4. ಕ್ಷಾಂತಿ : ಕ್ಷಮೆ, ಉದಾರವಾಗಿ ಇತರರ ತಪ್ಪುಗಳನ್ನು ಕ್ಷಮಿಸಬೇಕು. 

5. ಆರ್ಜವಂ: ಋಜುಭಾವ ಎಂದರೆ ಪ್ರಾಮಾಣಿಕತೆ.

ಆಚಾರ್ಯೋಪಾಸನಂ: ಗುರೂಪಾಸನೆ, ಗುರು ಶುಶ್ರೂಷೆ.

ಶೌಚಂ: ಶಾರೀರಿಕ ಹಾಗೂ ಮಾನಸಿಕ ಶುಚಿತ್ವ

ಸ್ಥೈರ್ಯಂ: ಧೃತಿಗೆಡದಿರುವಿಕೆ

ಆತ್ಮವಿನಿಗ್ರಹ: ಆತ್ಮ ಸಂಯಮ ,ಇಂದ್ರಿಯ ನಿಗ್ರಹ

ಸಮಚಿತ್ತತ್ವ: ಸುಖ ದುಃಖಗಳನ್ನು ಸಮವಾಗಿ ಸ್ವೀಕರಿಸುವುದು.

ಸಂಸಾರದಲ್ಲಿ ಅಂಟಿಯೂ ಅಂಟದಂತಿರುವುದು . ಇದು ಸ್ವಲ್ಪ ಕಷ್ಟವಾದರೂ, ದೈನಂದಿನ ಕರ್ತವ್ಯಗಳ ಫಲಾಫಲಗಳನ್ನೂ , ಆಗುಹೋಗುಗಳನ್ನೂ ಭಗವಂತನಲ್ಲಿ ಸಮರ್ಪಿಸುವ ಅಭ್ಯಾಸ ಬೆಳೆಸಿಕೊಂಡರೆ ಒಳ್ಳೆಯದು. ಸಂಸಾರದ ಇತರ ಸದಸ್ಯರಿಂದ ಅತಿಯಾದ ಅಪೇಕ್ಷೆ ತರವಲ್ಲ ಎಂದೂ ಅಭಿಪ್ರಾಯ.

ಕೊನೆಯದಾಗಿ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಭಗವಂತನಲ್ಲಿ ಅನನ್ಯವಾದ ಭಕ್ತಿ ,ಆತ ನಮ್ಮನ್ನೆಂದಿಗೂ ಕೈಬಿಡಲಾರ ಎಂಬ ಅಚಲ ಶ್ರದ್ಧೆ. ಇದೇ ಯೋಗದ ಕೊನೆಯ ಮೆಟ್ಟಿಲು. 

 ಹೀಗೆ ಈ ಎಲ್ಲಾ ಗುಣಗಳನ್ನು ನಾವು ಅಳವಡಿಸಿಕೊಳ್ಳುತ್ತಾ ಹೋದ ಹಾಗೆ, ಯೋಗದ ಅಂತಿಮ ಘಟ್ಟವಾದ ಅಧ್ಯಾತ್ಮ ವಿದ್ಯೆಯು ನಮಗೆ ಗೋಚರವಾಗಿ , ಭಗವಂತನಲ್ಲಿ ಭಕ್ತಿ ,ಶ್ರದ್ಧೆಗಳು ಬಲವಾಗಿ ಬೇರೂರಿ ಮನಸ್ಸು ಸದಾ ಅವನಲ್ಲೇ ಲೀನವಾಗಿರುವ ಸ್ಥಿತಿಯಲ್ಲಿ ಪ್ರಸನ್ನವಾಗಿರುತ್ತದೆ. ಇದೇ ಆನಂದ ಯೋಗ. 

ಆದ್ದರಿಂದ ಎಲ್ಲ ಯೋಗಾಭ್ಯಾಸಿಗಳೂ ದೇಹ ಸ್ವಾಸ್ದ್ಯದ ಜೊತೆಗೆ ಮನಸ್ಸಿನ ಆರೋಗ್ಯವನ್ನೂ ,ಆ ಮೂಲಕ ನಮ್ಮ ಚಾರಿತ್ರ್ಯ ವ್ಯಕ್ತಿತ್ವದ ಉನ್ನತಿಯನ್ನೂ ಸಾಧಿಸಿ ನಿಜವಾದ ಯೋಗಿಗಳಾಗೋಣವೇ?

2 comments:

 1. We are urgently in need of KlDNEY donors for the sum of $500,000.00 USD,(3 CRORE INDIA RUPEES) All donors are to reply via Email only: hospitalcarecenter@gmail.com or Email: kokilabendhirubhaihospital@gmail.com
  WhatsApp +91 7795833215

  ReplyDelete

Share your comments here !!

Related Posts Plugin for WordPress, Blogger...